ಅಗಸ್ತ್ಯ ಪತ್ನಿ, ವಿದರ್ಭ ರಾಜನ ಮಗಳು. ಅಗಸ್ತ್ಯ ತನ್ನ ಪಿತೃಗಳನ್ನು ನರಕದಿಂದ ಪಾರು ಮಾಡಲು ಮದುವೆಯಾಗಲು ಪ್ರಯತ್ನಿಸುತ್ತಾನೆ. ಪುತ್ರನನ್ನು ಹಡೆದು ಕೊಡುವ ಉತ್ತಮ ಸ್ತ್ರೀಗಾಗಿ ಹಲವು ದೇಶಗಳಲ್ಲಿ ಹುಡುಕಿದ. ಮನಮೆಚ್ಚುವ ಕನ್ಯೆ ದೊರೆಯಲಿಲ್ಲ. ಆಗ ಆತ ಒಂದೊಂದು ಜಾತಿಯ ಪ್ರಾಣಿಯ ಒಂದೊಂದು ಉತ್ಕøಷ್ಟವಾದ ಅಂಗವನ್ನು ತೆಗೆದು ಅವನ್ನೆಲ್ಲಾ ಜೋಡಿಸಿ ಸಮನಾದ ಅಂಗಸೌಷ್ಠವ ವಿರುವ ಹಂದರವನ್ನು ರಚಿಸಿದ. ಮಕ್ಕಳಿಲ್ಲದೆ ಕೊರಗುತ್ತಿದ್ದ ವಿದರ್ಭರಾಜನ ಹೆಂಡತಿಯಲ್ಲಿ ಮಗಳಾಗಿ ಜನಿಸುವಂತೆ ಅನುಗ್ರಹಿಸಿದ. ವಿದರ್ಭರಾಜನಲ್ಲಿ ಹುಟ್ಟಿದ ಸೌಂದರ್ಯವತಿಯಾದ ಹೆಣ್ಣು ಮಗುವಿಗೆ ಲೋಪಾಮುದ್ರೆ ಎಂದು ನಾಮಕರಣವಾಯಿತು. ಈಕೆ ಬೆಳೆದು ದೊಡ್ಡವಳಾದ ಅನಂತರದಲ್ಲಿ ಅಗಸ್ತ್ಯನ ಭಯಕ್ಕೆ ಯಾವ ಕ್ಷತ್ರಿಯ ರಾಜನೂ ಇವಳನ್ನು ಮದುವೆಯಾಗಲು ಮುಂದೆ ಬರಲಿಲ್ಲ. ಲೋಪಾಮುದ್ರೆ ಗೃಹಸ್ಥಧರ್ಮಕ್ಕೆ ಪಕ್ವವಾದ ಅನಂತರ ಅಗಸ್ತ್ಯ ವಿದರ್ಭ ರಾಜನಲ್ಲಿಗೆ ಬಂದು ಕನ್ಯೆಯನ್ನು ಬೇಡಿದ. ರಾಜವೈಭವಗಳಲ್ಲಿ ಬೆಳೆದ ಮಗಳನ್ನು ಮಹರ್ಷಿಗೆ ಕೊಡಲು ರಾಜ ನಿರಾಕರಿಸಿದ. ಆದರೆ ಬೆಳೆದ ಮಗಳೇ ಮಹರ್ಷಿಯನ್ನು ಮದುವೆಯಾಗಲು ಒಪ್ಪಿ ತಂದೆಯನ್ನು ಒತ್ತಾಯಿಸಿದಾಗ ಧಾರೆ ಎರೆದು ಕಳುಹಿಸಿದ. 

	ರಾಜಕುಮಾರಿಯಾದ ಈಕೆ ಮದುವೆಯಾದ ಅನಂತರ ತನ್ನ ಒಡವೆ ವಸ್ತ್ರಗಳನ್ನು ಕಳಚಿಟ್ಟು ನಾರುಮಡಿಯಲ್ಲಿ ಅಗಸ್ತ್ಯಾಶ್ರಮಕ್ಕೆ ಬರುತ್ತಾಳೆ. ಅಗಸ್ತ್ಯ ಲೋಪಾಮುದ್ರೆಯಲ್ಲಿ ಸಂತಾನಾಪೇಕ್ಷೆ ವ್ಯಕ್ತಪಡಿಸಿದ. ತನ್ನನ್ನು ಸೇರಬೇಕಾದರೆ ರಾಜಕುಮಾರಿಯ ವೇಷಭೂಷಣದಲ್ಲಿ ಮಾತ್ರ ಸಾಧ್ಯ. ಅದಲ್ಲದೆ ಅಗಸ್ತ್ಯಕೂಡ ರಾಜನ ವೇಷಭೂಷಣಗಳನ್ನು ಧರಿಸಬೇಕೆಂದು ಆಕೆ ಷರತ್ತು ವಿಧಿಸುವಳು. ಅಗಸ್ತ್ಯ ಧನಾರ್ಥಿಯಾಗಿ ಹಲವು ರಾಜರನ್ನು ಭೇಟಿಮಾಡಿದ. ಎಲ್ಲ ರಾಜರ ಸಂಪತ್ತೂ ಪ್ರಜೆಗಳಿಗೆ ಆಗುವಷ್ಟೆ ಇದ್ದು ಎಲ್ಲಿಯೂ ಹೆಚ್ಚು ಕಾಣದೆ ಚಿಂತಿಸುವಾಗ ಶ್ರುತರ್ವ, ಬ್ರದ್ನಶ್ವರ ಸಲಹೆಯ ಮೇರೆಗೆ ಇಲ್ವಲನ ಬಳಿಗೆ ಹೋಗಿ ಆತನಿಂದ ಹಣ ಪಡೆದು ಲೋಪಾಮುದ್ರೆಯ ಆಸೆಯಂತೆ ಪುತ್ರಸಂತಾನವನ್ನು ಪಡೆದ. ಈಕೆ ತನ್ನ ಗರ್ಭವನ್ನು ಏಳುವರ್ಷಗಳ ಕಾಲ ಹೊತ್ತು ಅನಂತರದಲ್ಲಿ ಸುಪುಷ್ಟ ಮಗನನ್ನು ಹಡೆದಳು. ಈತನೇ ದೃಢಸ್ಸು. ಈತ ಮಹಾತಪಸ್ವಿ. ಬಾಲ್ಯದಲ್ಲಿಯೇ ದೊಡ್ಡ ವಿದ್ವತ್ತು ಗಳಿಸಿ ಖ್ಯಾತಿ ಪಡೆದ. ಬಹಳ ಬಲಾಢ್ಯನಾಗಿದ್ದ. ಸಾವಿರ ಜನ ಹೊರುವ ಸಮಿತ್ತುಗಳನ್ನು ಒಬ್ಬನೇ ಹೊತ್ತು ತರುತ್ತಿದ್ದ. ಹೀಗಾಗಿ ಇಧ್ಮವಾಹನೆಂಬ ಹೆಸರಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ